ಪ್ರತಿಕ್ರಿಯೆ
	ಪ್ರತ್ಯಾವರಣ ಉದ್ದೀಪಕಗಳು ಜೀವಿಯ ಮೇಲೆ ಎಡಬಿಡದೆ ಪ್ರಭಾವ ಬೀರಿದಾಗ ಅವುಗಳಿಗೆ ಜೀವಿ ತೋರಿಸುವ ವರ್ತನೆಯ ಪ್ರತಿಕ್ರಿಯೆ. ಸಾಮಾನ್ಯವಾಗಿ ಮನ, ವಚನ ಮತ್ತು ಕಾಯ ಕ್ರಿಯಾರೂಪವಾಗಿರುವ ಪ್ರತಿಕ್ರಿಯೆಗಳು ಕೇವಲ ಉದ್ದೀಪಕಗಳನ್ನು ಅವಲಂಬಿಸಿದರೆ ಪ್ರತಿಕ್ರಿಯೆಯಲ್ಲಿ ತೊಡಗಿರುವ ಜೀವಿಯ ಮನೋದೈಹಿಕ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತವೆ. ಇದನ್ನಾಧರಿಸಿ ಯಾವುದೇ ಉದ್ದೀಪಕಕ್ಕೆ ಜೀವಿ ತೋರಿಸಬಹುದಾದ ಪ್ರತಿಕ್ರಿಯೆಯನ್ನು ಒಂದಿಲ್ಲ ಒಂದು ಸೂತ್ರರೂಪವಾಗಿ ಹೇಳಲು ಸಾಧ್ಯವಾಗುತ್ತದೆ. ಅಂಥ ಒಂದು ಸೂತ್ರವನ್ನು ಇಲ್ಲಿ ಕಾಣಬಹುದು.
ಪ್ರ=ಕಾ (ಜೀ, ಉ)
ಇಲ್ಲಿ ಪ್ರ=ಪ್ರತಿಕ್ರಿಯೆ. ಕಾ-ಕಾರ್ಯ, ಜೀ-ಜೀವಿ ಮತ್ತು ಉ=ಉದ್ದೀಪಕ. ಅಂದರೆ ಪ್ರತಿಕ್ರಿಯೆ ಜೀವಿ ಮತ್ತು ಉದ್ದೀಪಕಗಳ ನಡುವಣ ಸಾಹಚರ್ಯದ ಫಲಿತಾಂಶವೆಂದಂತಾಯಿತು. ಸೂತ್ರರೂಪದಲ್ಲಿ, ಪ್ರತಿಕ್ರಿಯೆ ಸರಳವಿದ್ದಂಥೆ ತೋರಿದರೂ ಸಾಮಾನ್ಯವಾಗಿ ಜಟಿಲವಾಗಿರುತ್ತದೆ. ಏಕೆಂದರೆ ಅದು ಒಂದು ಅಥವಾ ಹೆಚ್ಚು ಪ್ರಚೋದಕಗಳು ಜೀವಿಯ ಯಾವ ಯಾವ ಮನೋದೈಹಿಕಸ್ಥಿತಿ ಗತಿಗಳ ಮೇಲೆ ಹೇಗೆ ಮತ್ತು ಎಷ್ಟು ಪ್ರಭಾವ ಬೀರುತ್ತವೆ ಎಂಬುದನ್ನು ಅವಲಂಬಿಸುತ್ತದೆ. ಮೇಲಾಗಿ, ಪ್ರತಿಕ್ರಿಯೆಯೇ ಸಂಯುಕ್ತ ರೂಪದ್ದಾಗಿರಬಹುದು. ಅಂದರೆ ಒಂದೆಂದು ತೋರುವ ಪ್ರತಿಕ್ರಿಯೆಯಲ್ಲೇ ಹಲವಾರು ಕ್ರಿಯಾಂಶಗಳು ಸಮಾವೇಶವಾಗಿರಬಹುದು. ಉದಾಹರಣೆಗೆ, ಯಾವುದಾದರೂ ವಸ್ತುವನ್ನು ನೋಡುವ ಪ್ರತಿಕ್ರಿಯೆಯಲ್ಲಿ ಮನ ಮತ್ತು ಕಾರ್ಯಕ್ರಿಯೆಗಳು ಸಮಾವೇಶವಾಗಿರುವುದನ್ನು ಕಾಣಬಹುದು.
	ತನ್ನ ಪ್ರತ್ಯಾವರಣದೊಂದಿಗೆ ವ್ಯವಹರಿಸುವಲ್ಲಿ ಜೀವಿ ತೋರಿಸುವ, ತೋರಿಸಬಹುದಾದ ಪ್ರತಿಕ್ರಿಯೆಗಳ ಸಂಖ್ಯೆ ಅಪಾರ. ಅದರೂ ಅವುಗಳಲ್ಲಿ ಕೆಲವು ಪ್ರಧಾನವಾಗಿದ್ದು ನಮ್ಮ ವೈಜ್ಞಾನಿಕ ಅಧ್ಯಯನಕ್ಕೆ ಸುಲಭಸಾಧ್ಯವನಿಸುತ್ತವೆ. ಅಂಥ ಪ್ರತಿಕ್ರಿಯೆಗಳಲ್ಲಿ ರೂಪಾಂತರ, ವಿಲಂಬಿತ, ಸ್ವಚಲನಾ, ವಿಭೇದನ, ವಿಘಟಿತ, ವಿಯೋಜಿ, ಭಾವಾತ್ಮಕ-ಇತ್ಯಾದಿ ಪ್ರತಿಕ್ರಿಯೆಗಳನ್ನು ಇಲ್ಲಿ ಹೆಸರಿಸಬಹುದು. ಇವುಗಳಲ್ಲಿ ಒಂದೊಂದು ಜಟಿಲವಾಗಿದ್ದು ಸಂಶೋಧಕನಿಗೆ ವಿಶ್ಲೇಷಣಾತ್ಮಕ ಅಧ್ಯಯನದ ಅವಶ್ಯಕತೆಯನ್ನು ತಂದೊಡ್ಡುತ್ತವೆ.
	ತನ್ನ ಪ್ರತ್ಯಾವರಣದ ಉದ್ದೀಪಕಗಳಿಗೆ ವ್ಯಕ್ತಿ ತೋರಿಸುವ, ತೋರಿಸಬಹುದಾದ ಪ್ರತಿಕ್ರಿಯೆಗಳನ್ನೆಲ್ಲ ಸಾಮಾನ್ಯ, ಅಪಸಾಮಾನ್ಯ ಮತ್ತು ಅತಿಸಾಮಾನ್ಯ ಅಥವಾ ಅಸಾಧಾರಣ ಎಂಬುದಾಗಿ ವಿಂಗಡಿಸಬಹುದು. ಗೊತ್ತಾದ ಕಾಲದೇಶಕ್ಕನುಗುಣವಾಗಿ ಒಂದು ಗೊತ್ತಾದ ಉದ್ದೀಪಕಕ್ಕೆ ಬಹುತೇಕ ನಿರೀಕ್ಷಿತ ಪ್ರತಿಕ್ರಿಯೆ ತೋರಿಸುವುದು ಸಾಮಾನ್ಯವೆನಿಸುತ್ತದೆ. ಅದಕ್ಕೆ ಬದಲಾಗಿ ಆ ಪ್ರತಿಕ್ರಿಯೆ ದೌರ್ಜನ್ಯಕಾರಿಯಾಗಿದ್ದರೆ ಅಪಸಾಮಾನ್ಯವೆಂದೂ ಗಣನೀಯವಾಗಿ ರಚನಾತ್ಮಕವೂ ಸೃಜನಾತ್ಮಕವೂ ಆಗಿದ್ದರೆ ಅತಿಸಾಮಾನ್ಯವೆಂದೂ ಕರೆಯಲ್ಪಡುತ್ತದೆ. ಉದಾಹರಣೆಗೆ ಮೇಜು ಎಂಬ ಶಬ್ದ ಉದ್ದೀಪಕಕ್ಕೆ ಕುರ್ಚಿ ಎಂಬ ಮುಕ್ತ ಸಹಯೋಗಿ ಪ್ರತಿಕ್ರಿಯೆ ಬಂದಾಗ ಸಾಮಾನ್ಯವೆಂದೂ ಸಂಕಟ ಎಂದು ಬಂದಾಗ ಅಪಸಾಮಾನ್ಯವೆಂದೂ ಮತ್ತು ಕಾವ್ಯ ಎಂದು ಬಂದಾಗ ಅತಿಸಾಮಾನ್ಯವೆಂದೂ ಹೇಳಬಹುದು.
	ವಿವಿಧ ಮನೋವಿಚಾರಗಳನ್ನು ಸೂಚಿಸುವಾಗ, ನಿಧಾನ ಮನೋವಿಜ್ಞಾನಿಗಳು ಪ್ರತಿಕ್ರಿಯೆ ಎಂಬ ಪದವನ್ನು ಸೇರಿಸುವುದನ್ನು ಕಾಣಬಹುದು. ಅದರಂತೆ ವಿವಿಧ ಮನೋವಿಕಾರಗಳಿಗೆ ನೀಡಲಾಗಿರುವ ಹೆಸರುಗಳಲ್ಲಿ, ತಂತ್ರಿಕಾತಾಪ ಪ್ರತಿಕ್ರಿಯೆ, ಮನೋವಿಕ್ಷಿಪ್ತಿ ವಿಸಾಂಘಿಕ ಪ್ರತಿಕ್ರಿಯೆ, ಮನೋದೈಹಿಕ ಪ್ರತಿಕ್ರಿಯೆ, ವಿಘಟಿತ ಪ್ರತಿಕ್ರಿಯೆ ಮುಂತಾದವು ಪ್ರಧಾನವಾಗಿವೆ.
	ಪ್ರತಿಕ್ರಿಯೆಯ ಸ್ವಭಾವ ಮತ್ತು ಲಕ್ಷಣಗಳ ಬಗ್ಗೆ ನಮಗೆ ಹೆಚ್ಚು ನಿಖರವಾದ ಮಾಹಿತಿ ದೊರೆಯುವುದು ಪ್ರಾಯೋಗಿಕ ಮನೋವೈಜ್ಞಾನಿಕ ಅಧ್ಯಯನಗಳಲ್ಲಿ ಅದರಲ್ಲಿಯೂ ಪ್ರತಿಕ್ರಿಯೆ ಕಾಲದ ಬಗ್ಗೆ ಹೆಚ್ಚು ವ್ಯಾಪಕವೂ ವೈಧಾನಿಕವೂ ಆದ ಅಧ್ಯಯನಗಳು ನಡೆದಿರುವುದನ್ನು ಕಾಣಬಹುದು.
	ಪ್ರತಿಕ್ರಿಯೆ ಕಾಲ : ವಿಶಿಷ್ಟ ಉದ್ದೀಪಕವೊಂದಕ್ಕೆ ವಿಶಿಷ್ಟ ಪ್ರತಿಕ್ರಿಯೆ ತೋರಿಸಲು ಬೇಕಾದ ಕಾಲಾವಧಿಯೇ ಪ್ರತಿಕ್ರಿಯೆ ಕಾಲ. ಅಂದರೆ ಉದ್ದೀಪಕದ ಪ್ರಾರಂಭಿಕ ಕ್ಷಣ ಮತ್ತು ಪ್ರತಿಕ್ರಿಯೆಯ ಪ್ರಾರಂಭಿಕ ಕ್ಷಣಗಳ ನಡುವಣ ಅಂತರವೇ ಪ್ರತಿಕ್ರಿಯೆ ಕಾಲವೆನಿಸುತ್ತದೆ. ಉದಾಹರಣೆಗೆ ಪ್ರಾಯೋಗಿಕವಾಗಿ ದೀಪವೊಂದು ಮಿನುಗಿದಾಗ ಅದನ್ನು ಗ್ರಹಿಸಿ ಪ್ರಯೋಗಾರ್ಥಿ ಸಂಬಂಧಿಸಿದ ಟೆಲಿಗ್ರಾಫಿಕ್ ಕುಂಜಿಯೊಂದನ್ನು ಒತ್ತುವುದರ ಮೂಲಕ ಬೆಳಕಿಗೆ ತನ್ನ ಪ್ರತಿಕ್ರಿಯೆ ತೋರಿಸುತ್ತಾನೆ. ಇಲ್ಲಿ ದೀಪ ಮಿನುಗಿದ ಕ್ಷಣದಿಂದ ಟೆಲಿಗ್ರಾಫಿಕ್ ಕುಂಜಿಯನ್ನು ಒತ್ತುವ ವರೆಗಿನ ಅಂತರವೇ ಪ್ರತಿಕ್ರಿಯಾಕಾಲವೆನಿಸುತ್ತದೆ. ಇಂಥ ಕಾಲಾವಧಿಯನ್ನು ಅಳೆಯಲು ಕಾಲಮಾಪಿಯನ್ನು ಬಳಸಲಾಗುತ್ತದೆ.
	ಪ್ರತಿಕ್ರಿಯೆ ಕಾಲ ಪ್ರಯೋಗಗಳಲ್ಲಿ ಉದ್ದೀಪಕಗಳನ್ನು ಕೊಡಲೂ ಮತ್ತು ಪ್ರತಿಕ್ರಿಯೆ ಕಾಲವನ್ನು ದಾಖಲು ಮಾಡಿಕೊಳ್ಳಲೂ ಪ್ರಮಾಣಿತ ಸ್ಥಿತಿಗತಿಗಳ ಹಾಗೂ ಮಾಪನಗಳ ಅಗತ್ಯವಿದೆ. ಈ ಅಗತ್ಯವನ್ನು ಪೂರೈಸಲು ಮಾಡಲಾದ ವ್ಯವಸ್ಥೆಗಳಲ್ಲಿ ಪ್ರಾರೂಪಿತ ವ್ಯವಸ್ಥೆಯಲ್ಲಿ ಉದ್ದೀಪಕ ಮೂಲ (ಉದಾ: ಬೆಳಕಿನ ಬಲ್ಬು ಅಥವಾ ಝೇಂಕಾರಸಾಧನ). ಒಂದು ಜೊತೆ ಟೆಲಿಗ್ರಾಫಿಕ್ ಕುಂಜಿಗಳು ಮತ್ತು ಒಂದು ಕಾಲಮಾಪಿ.
	ಪ್ರಾರೂಪಿತ ಪ್ರತಿಕ್ರಿಯೆ ಕಾಲ ಪ್ರಯೋಗಪರಿಕರದ ನಕ್ಷೆಯೊಂದನ್ನು ಮುಂದೆ ಕೊಟ್ಟಿದೆ.
	ಚಿತ್ರದಲ್ಲಿ ತೋರಿಸಿರುವ ಎರಡು ಟಿಲಿಗ್ರಾಫಿಕ್ ಕುಂಜಿಗಳನ್ನು ಮೋಟಾರಿನ ಚಲನೆ ಮತ್ತು ನಿಲುಗಡೆಗಾಗಿ ಬಳಸಲಾಗುತ್ತದೆ. ಪ್ರಯೋಗಕರ್ತ ಕುಂಜಿಯನ್ನೊತ್ತಿದಾಗ ಸಂಬಂಧಪಟ್ಟ ಉದ್ದೀಪಕ ಉಂಟಾಗುತ್ತದೆಯಲ್ಲದೆ ಕಾಲಮಾಪಿಯ ಸೂಚೀಫಲಕ ಚಲಿಸತೊಡಗುತ್ತದೆ. ಪ್ರಯೋಗಾರ್ಥಿ ಉದ್ದೀಪಕವನ್ನು ತಿಳಿದು ಕುಂಜಿಯಿಂದ ತನ್ನ ಬೆರಳನ್ನು ತೆಗೆದಾಗ ವಿದ್ಯುತ್ ಸಂಪರ್ಕ ಕಡಿದು ಮೋಟಾರು ನಿಂತು ಸೂಚೀಫಲಕವೂ ನಿಲ್ಲುತ್ತದೆ. ಸಹಯೋಗೀ ಪ್ರತಿಕ್ರಿಯೆ ಕಾಲವನ್ನು ಅಳೆಯಬೇಕಾದಾಗ ಟೆಲಿಗ್ರಾಫಿಕ್ ಕುಂಜಿಗಳಿಗೆ ಬದಲಾಗಿ ಧ್ವನಿಕುಂಜಿಗಳನ್ನು ಬಳಸಬಹುದು.

ಚಿತ್ರ-1

	ಚಿತ್ರದಲ್ಲಿ ಸೂಚಿತವಾಗಿರುವಂತೆ, ಯಾವುದೇ ಪ್ರತಿಕ್ರಿಯಾಕಾಲ ಪ್ರಯೋಗದಲ್ಲಿ, ನಾನಾರೀತಿಯ ಇಂದ್ರಿಯ ಉದ್ದೀಪಕಗಳನ್ನು ಬಳಸಬಹುದು. ಒಂದು ಉದ್ದೀಪಕ ಮತ್ತು ಒಂದು ಪ್ರತಿಕ್ರಿಯೆಗಳ ನಡುವಣ ಕಾಲಾವಧಿಗೆ ಮಾತ್ರವಲ್ಲದೆ ನಿರಂತರವಾಗಿ ಉಂಟಾಗುತ್ತಿರುವ ಉದ್ದೀಪಕಗಳ ಸರಣಿಯೊಂದಕ್ಕೆ, ಜೀವಿಯೊಂದು ತೋರಿಸಬಹುದಾದ ಅನುಕ್ರಿಯಾಸರಣಿಯೊಂದಕ್ಕೆ ಬೇಕಾಗುವ ಕಾಲಾವಧಿಗೂ ಪ್ರತಿಕ್ರಿಯೆ ಕಾಲವೆಂದು ಹೇಳಲಾಗುತ್ತದೆ.
	ಹಿನ್ನೆಲೆ: ಪ್ರತಿಕ್ರಿಯಾ ಕಾಲ ಪ್ರಯೋಗಗಳ ಮೂಲರೂಪಗಳನ್ನು ಶರೀರ ವಿಜ್ಞಾನಿ ಮತ್ತು ಖಗೋಳವಿಜ್ಞಾನಿಗಳ ಅಧ್ಯಯನಗಳಲ್ಲಿ ನಾವು ಕಾಣಬಹುದು. ಪ್ರಧಾನವಾಗಿ ಇಲ್ಲಿ ಮೂವರು ವಿಜ್ಞಾನಿಗಳನ್ನು ಹೆಸರಿಸಬಹುದು. ಬ್ರಸಲ್ಸಿನ ಖಗೋಳ ವಿಜ್ಞಾನಿ ಫ್ರೈಡ್ರಿಚ್ 1822ರಲ್ಲಿ ಖಗೋಳ ವೀಕ್ಷಣೆಯಲ್ಲಿ ವಿವಿಧ ಅವಲೋಕಕರ ನಡುವಣ ಭೇದವನ್ನು ಅರಿಯಲು ಪ್ರತಿಕ್ರಿಯೆ ಕಾಲವನ್ನು ಸಾಧನವನ್ನಾಗಿ ಬಳಸಿದ. ಸುಪ್ರಸಿದ್ಧ ಶರೀರ ವಿಜ್ಞಾನಿ ಹೆಲ್ಮ್‍ಹೋಲ್ಟ್ಸ್ 1850ರಲ್ಲಿ ತಂತ್ರಿಕಾ ವಹನ ವೇಗವನ್ನು ಕಂಡುಹಿಡಿಯಲು ಯತ್ನಿಸಿದ. ಅಂತೆಯೇ ಅಮೆರಿಕದ ಓ. ಎಂ. ಮಿಚೆಲ್ ಮತ್ತು ಸ್ವಿಟ್ಸರ್‍ಲೆಂಡಿನ ಹರ್ಷ್ ಎಂಬ ಖಗೋಳ ವಿಜ್ಞಾನಿಗಳೂ ಪ್ರತಿಕ್ರಿಯಾ ಕಾಲವನ್ನು ಅಳೆಯಲು ಯತ್ನಿಸಿದರು. ಹರ್ಷ್ ಕಾಲಮಾಪಿ ಇಂದೂ ಉಪಯುಕ್ತ ಸಾಧನವಾಗಿ ಉಳಿದಿದೆ.
	ಪ್ರತಿಕ್ರಿಯೆ ಕಾಲಕ್ಕೆ ಸಂಬಂಧಿಸಿದಂತೆ ಮೂರು ಮೂಲ ಅಧ್ಯಯನಗಳನ್ನು ಇಲ್ಲಿ ಹೆಸರಿಸಬಹುದು. ಮೊದಲನೆಯದಾಗಿ 1868ರಲ್ಲಿ, ಜಟಿಲ ಪ್ರತಿಕ್ರಿಯಾ ಕಾಲಕ್ಕೆ ಸಂಬಂಧಿಸಿದಂತೆ ಮಾನಸಿಕ ಕ್ರಿಯೆಗಾಗಿ ಆಗುವ ಕಾಲದ ಹೆಚ್ಚಳವನ್ನು ವಿಶ್ಲೇಷಿಸಲು ಡಾಂಡರ್ಸ್ ಅನೇಕ ಪ್ರಯೋಗಗಳನ್ನು ನಡೆಸಿದ ಫಲವಾಗಿ ಸರಳ ಮತ್ತು ವಿಯೋಜೀ ಪ್ರತಿಕ್ರಿಯೆ ಕಾಲಗಳ ನಡುವಣ ಭೇದದ ಬಗ್ಗೆ ಮಾಹಿತಿ ದೊರೆಯಲು ಸಾಧ್ಯವಾಯಿತು. ಎರಡನೆಯದಾಗಿ ಪ್ರತಿಕ್ರಿಯೆ ಕಾಲ ಎಂಬ ಹೆಸರನ್ನಿಟ್ಟ ಖ್ಯಾತ ವಿಜ್ಞಾನಿ ಸೀಗ್‍ಮಂಡ್ ಎಕ್ಸೆನರ್ 1873ರಲ್ಲಿ ನಡೆಸಿದ ಪ್ರಯೋಗಗಳು, ಸಿದ್ಧತೆ ಮತ್ತು ಅನುಕ್ರಿಯೆಯ ಅನೈಚ್ಛಿಕತೆಗೆ ಸಂಬಂಧಿಸಿದಂತೆ ಪ್ರಯೋಗಾರ್ಥಿಯೂ ಅನುಭವಗಳ ಮಹತ್ತ್ವವನ್ನು ಎತ್ತಿ ತೋರಿಸಿದುವು. ಕೊನೆಯದಾಗಿ, ಆಧುನಿಕಪ್ರಯೋಗಿಕ ಮನೋವಿಜ್ಞಾನದ ಪಿತೃವೆನಿಸಿದ ವಿಲ್‍ಹೆಮ್‍ವೊಂಟ್ 1880ರಲ್ಲಿ ಉದ್ದೀಪಕವನ್ನು ಗುರುತಿಸುವುದಕ್ಕಾಗಿ ಪ್ರತಿಕ್ರಿಯಾ ಕಾಲವನ್ನು ಅಳೆಯಲು ಮಾಡಿದ ಸಫಲ ಪ್ರಯತ್ನ ಮುಖ್ಯವಾದ್ದು. ಒಟ್ಟಿನಲ್ಲಿ ಮೇಲ್ಕಂಡ ಮೂವರು ವಿಜ್ಞಾನಿಗಳು ಪ್ರತಿಕ್ರಿಯೆ ಕಾಲ ಪ್ರಯೋಗಗಳ ಮೂಲಪುರಷರೆನಿಸಿಕೊಂಡಿದ್ದಾರೆ.
	ಪ್ರತಿಕ್ರಿಯೆ ಕಾಲದ ಪ್ರಮುಖ ಪ್ರರೂಪಗಳೆಂದರೆ ಸರಳ ಪ್ರ.ಕಾ., ವಿಭೇದನ ಪ್ರ,ಕ., ಆಯ್ಕೆ ಪ್ರ.ಕಾ., ಮತ್ತು ಸಹಯೋಗಿ ಪ್ರ.ಕಾ., ಯಾವುದಾದರೂ ಐಂದ್ರಿಯ ಉದ್ದೀಪಕಕ್ಕೆ (ಉದಾ-ಬೆಳಕು) ಪ್ರಯೋಗಾರ್ಥಿ ಸಾಧ್ಯವಾದಷ್ಟು ವೇಗವಾಗಿ ಪ್ರತಿಕ್ರಿಯೆ ತೋರಿಸಲು ಕಳೆಯುವ ಕಾಲಾವಧಿಯೇ ಸರಳ ಪ್ರತಿಕ್ರಿಯೆ ಕಾಲ ಎನಿಸುತ್ತದೆ.
	ವಿಭೇದನ ಮತ್ತು ಆಯ್ಕೆ ಪ್ರತಿಕ್ರಿಯೆಗಳನ್ನು ಸಂಯುಕ್ತವಾಗಿ ವಿಯೋಜೀ ಪ್ರತಿಕ್ರಿಯೆ ಎಂದು ಕರೆಯಲಾಗಿದೆ. ಇಲ್ಲಿ ಉದ್ದೀಪಕ ಮತ್ತು ಪ್ರತಿಕ್ರಿಯೆಗಳ ನಡುವಣ ಅವಧಿಯಲ್ಲಿ ಹೆಚ್ಚಿನ ಮನೋವ್ಯಾಪಾರ ನಡೆಯಬೇಕಾಗುತ್ತದೆ. ಆದ್ದರಿಂದ ವಿಯೋಜೀ ಪ್ರತಿಕ್ರಿಯೆ ಕಾಲ ಸರಳ ಪ್ರತಿಕ್ರಿಯೆ ಕಾಲಕ್ಕಿಂತ ಗಣನೀಯವಾಗಿ ಹೆಚ್ಚಾಗಿರುತ್ತದೆ. ಎರಡು ಅಥವಾ ಹೆಚ್ಚಿನ ಉದ್ದೀಪಕಗಳನ್ನು ಕೊಟ್ಟು ಅವುಗಳಲ್ಲಿ ಯಾವುದಾದರೂ ನಿರ್ದಿಷ್ಟ ಉದ್ದೀಪಕಕ್ಕೆ, ಅನುಕ್ರಿಯೆ ತೋರಿಸಲು ಪ್ರಯೋಗಾರ್ಥಿಗೆ ಹೇಳಿದಾಗ, ಆ ಉದ್ದೀಪಕಗಳ ನಡುವಣ ಭೇದವನ್ನು ತಿಳಿಯಬೇಕಾದ್ದು ಅನಿವಾರ್ಯವಾಗುತ್ತದೆ. ಹೀಗೆ ವಿಭೇದನ ಕ್ರಿಯೆಗೆ ಹೆಚ್ಚಿನ ಕಾಲವ್ಯಯವಾಗುವುದರಿಂದ ಸರಳ ಪ್ರತಿಕ್ರಿಯೆ ಕಾಲ ವಿಭೇದನ ಪ್ರತಿಕ್ರಿಯೆ ಕಾಲಕ್ಕಿಂತ ಗಣನೀಯವಾಗಿ ಹೆಚ್ಚಾಗಿರುತ್ತದೆ. ಹೀಗೆಯೇ ಆಯ್ಕೆ ಪ್ರತಿಕ್ರಿಯೆ ಕಾಲ ವಿಭೇದನ ಪ್ರತಿಕ್ರಿಯೆ ಕಾಲಕ್ಕಿಂತ ಹೆಚ್ಚಾಗಿರುವುದನ್ನು ಕಾಣಬಹುದು. ಏಕೆಂದರೆ, ಇಲ್ಲಿ ಎರಡು ಅಥವಾ ಹೆಚ್ಚಿನ ಉದ್ದೀಪಕಗಳ ವಿಭೇದನ ಕಾರ್ಯದ ಜೊತೆಗೆ, ಅವುಗಳಿಗೆ ಅನುಗುಣವಾದ ಅನುಕ್ರಿಯೆಗಳನ್ನು ತೋರಿಸಲು ಹೇಳಿದಾಗ ಪ್ರಯೋಗಾರ್ಥಿ ಅನುಕ್ರಿಯೆಗಳ ಆಯ್ಕೆ ಮಾಡಬೇಕಾಗುತ್ತದೆ. ಹೀಗೆ ವಿಭೇದನ ಮತ್ತು ಆಯ್ಕೆ ಎರಡು ಹೆಚ್ಚಿನ ಮಾನಸಿಕ ಕ್ರಿಯೆಗಳ ಪ್ರಯುಕ್ತ ಆಯ್ಕೆ ಪ್ರತಿಕ್ರಿಯೆ ಕಾಲ ಹೆಚ್ಚುತ್ತದೆ. ಉದಾಹರಣೆಗೆ ಬೆಳಕು ಮತ್ತು ಶಬ್ದ ಈ ಎರಡು ಉದ್ದೀಪಕಗಳನ್ನು ಅಡ್ಡಾದಿಡ್ಡಿ ಕ್ರಮದಲ್ಲಿ ಕೊಟ್ಟು, ಅವುಗಳೆರಡರಲ್ಲಿ ಬೆಳಕಿಗೆ ಮಾತ್ರ ಅನುಕ್ರಿಯೆ ತೋರಿಸುವಂತೆ ಹೇಳಿದಾಗ ಪ್ರಯೋಗಾರ್ಥಿ ಕೊಟ್ಟಿರುವ ಉದ್ದೀಪಕ ಬೆಳಕೋ ಶಬ್ದವೋ ಎಂದು ತಿಳಿದು, ಬೆಳಕಾಗಿದ್ದರೆ ಟೆಲಿಗ್ರಾಫಿಕ್ ಕುಂಜಿಯನ್ನು ಒತ್ತಬೇಕಾಗುತ್ತದೆ. ಇಲ್ಲಿ ಬೆಳಕು ಮತ್ತು ಶಬ್ದ ಉದ್ದೀಪಕಗಳ ವಿಭೇದನ ಕ್ರಿಯೆಗಾಗಿ ಆತ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಈ ಕಾರಣದಿಂದ ವಿಭೇದನ ಪ್ರತಿಕ್ರಿಯೆ ಕಾಲ ಸರಲ ಪ್ರತಿಕ್ರಿಯೆ ಕಾಲಕ್ಕಿಂತ ಅಧಿಕವಾಗಿರುತ್ತದೆ. ಆಯ್ಕೆ ಪ್ರತಿಕ್ರಿಯೆಯಲ್ಲಿ ಬೆಳಕು ಮತ್ತು ಶಬ್ದ ಉದ್ದೀಪಕಗಳಿಗೆ ಸಂಬಂಧಪಟ್ಟ ಟೆಲಿಗ್ರಾಫಿಕ್ ಕುಂಜಿಗಳನ್ನು ಒತ್ತಲು ಹೇಳಿದಾಗ ಪ್ರಯೋಗಾರ್ಥಿ ಅವೆರಡರ ನಡುವಣ ಭೇದವನ್ನು ಗ್ರಹಿಸುವುದರ ಜೊತೆಗೆ ಹೇಳಿದಾಗ ಪ್ರಯೋಗಾರ್ಥಿ ಅವೆರಡರ ನಡುವಣ ಭೇದವನ್ನು ಗ್ರಹಿಸುವುದರ ಜೊತೆಗೆ ಆಯಾಯ ಉದ್ದೀಪಕಕ್ಕೆ ಸೂಕ್ತವಾದ ಕುಂಜಿಯನ್ನು ಆರಿಸಿ ಅದನ್ನು ಒತ್ತಬೇಕಾಗುತ್ತದೆ. ಹೀಗೆ ವಿಭೇದನ ಮತ್ತು ಆಯ್ಕೆ ಕ್ರಿಯೆಗಳೆರಡರ ಸಲುವಾಗಿ, ಆಯ್ಕೆ ಪ್ರತಿಕ್ರಿಯೆ ಕಾಲ ವಿಭೇದನ ಪ್ರತಿಕ್ರಿಯೆ ಕಾಲಕ್ಕಿಂತ ಹೆಚ್ಚಾಗಿರುತ್ತದೆ.
	ಸಹಯೋಗಿ ಪ್ರತಿಕ್ರಿಯೆಯಲ್ಲಿ, ಯಾವುದಾದರೂ ಪದ ಉದ್ದೀಪಕಕ್ಕೆ ಸಹಯೋಗೀ ಪದಾನುಕ್ರಿಯೆಯನ್ನು ಕೊಟ್ಟು ಪ್ರಯೋಗಾರ್ಥಿ ಅದೇ ಸಮಯದಲ್ಲಿ ಟೆಲಿಗ್ರಾಫಿಕ್ ಕುಂಜಿಯನ್ನು ಒತ್ತಬೇಕಾಗುತ್ತದೆ. ಸಾಮಾನ್ಯವಾಗಿ ಈ ಪ್ರಯೋಗಗಳಲ್ಲಿ ಧ್ವನಿ ಕುಂಜಿಗಳನ್ನು ಬಳಸಲಾಗುತ್ತದೆ. ಈ ಕಾರ್ಯಕ್ಕಾಗಿ ಆತ ತೆಗೆದುಕೊಳ್ಳುವ ಪ್ರತಿಕ್ರಿಯೆ ಕಾಲ ಮೇಲೆ ಹೇಳಿದ ಪ್ರತಿಕ್ರಿಯೆ ಕಾಲಗಳಿಗಿಂತ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಅಲ್ಲದೆ ನಿರೀಕ್ಷಿತ ಸಹಯೋಗದ ಸ್ವಭಾವಕ್ಕನುಗುಣವಾಗಿ ಪ್ರತಿಕ್ರಿಯೆ ಕಾಲದ ಪರಿಮಾಣದಲ್ಲಿ ವ್ಯತ್ಯಾಸವಾಗುವುದನ್ನು ಕಾಣಬಹುದು. ಸಾಮಾನ್ಯವಾಗಿ ನಿಯಂತ್ರಿತ ಸಹಯೋಗದ ಪ್ರತಿಕ್ರಿಯೆ ಕಾಲ ಮುಕ್ತ ಸಹಯೋಗದ ಪ್ರತಿಕ್ರಿಯೆ ಕಾಲಕ್ಕಿಂತ ಕಡಿಮೆಯಾಗಿರುತ್ತದೆ. ಏಕೆಂದರೆ ನಿಯಂತ್ರಿತ ಸಹಯೋಗ ಪ್ರತಿಕ್ರಿಯೆಯಲ್ಲಿ ಉದ್ದೀಪಕಕ್ಕೆ ಒಂದು ನಿರ್ದಿಷ್ಟ ಸಹಯೋಗಿ ಇರುವುದರಿಂದ ಆಯ್ಕೆಯ ಕಾರಣವಿರುವುದಿಲ್ಲ. ಆದರೆ ಮುಕ್ತ ಸಹಯೋಗ ಪ್ರತಿಕ್ರಿಯೆಯಲ್ಲಿ ಒಂದು ಅಥವಾ ಹೆಚ್ಚು ಅನುಕ್ರಿಯೆಗಳು ಮನಃಪಟಲದಲ್ಲಿ ಸುಳಿದಾಗ, ಸಾಮಾನ್ಯವಾಗಿ ಆಯ್ಕೆ ಕ್ರಿಯೆ ನಡೆಯಬೇಕಾಗುತ್ತದೆ. ಇದರಿಂದಾಗಿ ಪ್ರತಿಕ್ರಿಯೆ ಕಾಲ ಹೆಚ್ಚಾಗುತ್ತದೆ. ಆದರೆ ಮುಕ್ತ ಮತ್ತು ನಿಯಂತ್ರಿತ ಸಹಯೋಗಗಳ ಉದ್ದೀಪಕಗಳು ಸಾಪೇಕ್ಷವಾಗಿ ಅಪರಿಚಿತವಾದವುಗಳಾದರೆ ನಿಯಂತ್ರಿತ ಸಹಯೋಗ ಪ್ರತಿಕ್ರಿಯೆ ಕಾಲ ಗಣನೀಯವಾಗಿ ಹೆಚ್ಚುತ್ತದೆ. ಅಲ್ಲದೆ ಅಂಥ ಸಂದರ್ಭದಲ್ಲಿ ಪ್ರಯೋಗಾರ್ಥಿ ಸೂಕ್ತ ಪ್ರತಿಕ್ರಿಯೆ ತೋರಿಸುವಲ್ಲಿ ವಿಫಲನಾಗುವ ಸಾಧ್ಯತೆಯೇ ಹೆಚ್ಚು.
	ನಿರ್ಧಾರಕಗಳು : ಜೀವಿ ಮತ್ತು ಪ್ರಚೋದಕಗಳ ಸ್ಥಿತಿಗತಿಗಳನ್ನು ಪ್ರತಿಕ್ರಿಯೆ ಕಾಲದ ಮೇಲೆ ಪ್ರಭಾವ ಬೀರುತ್ತವೆ. ಸಂಬಂಧಪಟ್ಟ ಸ್ಥಿತಿಗತಿಗಳ ಬಲಾಬಲ ಮತ್ತು ಸ್ವಭಾವಗಳಿಗೆ ಅನುಗುಣವಾಗಿ ಪ್ರತಿಕ್ರಿಯೆ ಕಾಲದಲ್ಲಿ ವ್ಯತ್ಯಾಸವಾಗುವುದುಂಟು. ಸ್ಥಿತಿಗತಿಗಳ ತೀವ್ರತೆ ಹೆಚ್ಚಿದಾಗ ಸಾಮಾನ್ಯವಾಗಿ, ಪ್ರತಿಕ್ರಿಯೆ ಕಾಲ ಕಡಿಮೆಯಾಗುತ್ತದೆ ಆದರೂ ಆ ಕಾಲ ಒಂದು ಕನಿಷ್ಠ ಮಟ್ಟಕ್ಕಿಂತ ಕಡಿಮೆಯಾಗಲಾರದು ಎಂಬುದನ್ನು ಗಮನಿಸಬೇಕು. ಸ್ಥಿತಿಗತಿಗಳ ಜಟಿಲತೆಯೂ ಪ್ರತಿಕ್ರಿಯೆ ಕಾಲವನ್ನು ಹೆಚ್ಚಿಸುತ್ತದೆ. ಆದರೆ ಅಭ್ಯಾಸ ನಿಮಿತ್ತವಾಗಿ ಕೆಲವು ಸ್ಥಿತಿಗತಿಗಳು ಯಾಂತ್ರಿಕವಾದಾಗ, ಪ್ರತಿಕ್ರಿಯೆ ಕಾಲ ಸಾಪೇಕ್ಷವಾಗಿ ಕಡಮೆಯಾಗುವ ಸಂಭವ ಹೆಚ್ಚು.
	ಪ್ರತಿಕ್ರಿಯೆ ಕಾಲವನ್ನು ನಿರ್ಧರಿಸುವ ನಾನಾ ಸ್ಥಿತಿಗತಿಗಳನ್ನು ಪ್ರಮುಖವಾಗಿ ಮೂರು ವಿಭಾಗ ಮಾಡಬಹುದು. ಅವು: 1 ಉದ್ದೀಪಕಗಳ ಗುಣಲಕ್ಷಣಗಳು. 2 ಜೀವಿಯ ಚಿತ್ತಸ್ಥಿತಿ ಮತ್ತು ಅಭಿವೃತ್ತಿ 3 ವೈಯುಕ್ತಿಕ ವ್ಯತ್ಯಾಸಗಳು.
	ವಿವಿಧ ರೀತಿಯ ಇಂದ್ರಿಯ ಉದ್ದೀಪಕಗಳು (ಉದಾ: ಬೆಳಕು, ಶಬ್ದ, ವಾಸನೆ ಇತ್ಯಾದಿ) ಮತ್ತು ಅವುಗಳ ತೀವ್ರತೆ ಅವಧಿ ನೆಲೆ ಮುಂತಾದ ಸ್ಥಿತಿಗತಿಗಳು ಪ್ರತಿಕ್ರಿಯೆ ಕಾಲದ ಮೇಲೆ ಪ್ರಭಾವ ಬೀರುತ್ತವೆ. ವಿವಿಧ ಇಂದ್ರಿಯೋದ್ದೀಪಗಳಿಗೂ ಪ್ರತಿಕ್ರಿಯೆ ಕಾಲಕ್ಕೂ ಇರುವ ಗಣನೀಯ ಸಂಬಂಧವನ್ನು ಈ ಕೆಳಗಿನ ಕೋಷ್ಠಕದಲ್ಲಿ ಕೊಟ್ಟಿರುವ ವಿವರಗಳಿಂದ ತಿಳಿಯಬಹುದು.
ಕೋಷ್ಠಕ: ಇಂದ್ರಿಯೋದ್ದೀಪಕಗಳು ಮತ್ತು ಪ್ರತಿಕ್ರಿಯೆ ಕಾಲ
ಇಂದ್ರಿಯೋದ್ದೀಪಕ
ಪ್ರತಿಕ್ರಿಯೆ ಕಾಲದ ಅಂತರ

ಸ್ಪರ್ಶ
110-150 ಮಿಲಿ ಸೆಕೆಂಡ್‍ಗಳು

ಶಬ್ದ
120-160 ಮಿಸೆ

ಬೆಳಕು
150-200 ಮಿಸೆ

ಶೀತೋಷ್ಣ
150-200 ಮಿಸೆ

ವಾಸನೆ
200-500 ಮಿಸೆ

ರುಚಿ
200-1100 ಮಿಸೆ

ವೇದನೆ
700-1000 ಮಿಸೆ

	ಮೇಲಿನ ಕೋಷ್ಟಕದಲ್ಲಿರುವ ವಿವರಗಳು ಸೂಚಿಸುವಂತೆ ವಿವಿಧರೀತಿಯ ಇಂದ್ರಿಯೋದ್ದೀಪಗಳಿಗೆ ಜೀವಿ ತೋರಿಸುವ ಪ್ರಕಾಲದಲ್ಲಿ ಗಣನೀಯ ವ್ಯತ್ಯಾಸಗಳಿರುವುದಕ್ಕೆ ಪ್ರಮುಖ ಕಾರಣಗಳೆಂದರೆ, ಕೆಲವು ಗ್ರಾಹಕೇಂದ್ರಿಯಗಳು ಪರಿಧಿ ಉದ್ದೀಪಕಗಳಿಗೆ ಸುಲಭವಾಗಿ ನಿಲಕಿದರೆ (ಉದಾ: ಸ್ಪರ್ಶ); ಕೆಲವು ಸುಲಭವಾಗಿ ನಿಲಕವು (ಉದಾ: ಶೀತೋಷ್ಣ); ಮತ್ತು ಕೆಲವು ಸಂವೇದನಾವ್ಯವಸ್ಥೆಗಳು ಗತಿವ್ಯವಸ್ಥೆಗಳೊಂದಿಗೆ ಹೆಚ್ಚು ಶೀಘ್ರವಾಗಿ ಸಂಪರ್ಕ ಕಲ್ಪಿಸಿಕೊಳ್ಳುಬಲ್ಲವು (ಉದಾ: ಶ್ರವಣ ವ್ಯವಸ್ಥೆ). ಈ ಎರಡು ಕಾರಣಗಳ ಜೊತೆಗೆ, ಉದ್ದೀಪನಗೊಂಡಾಗ, ಜೀವಿಯಲ್ಲಿ ಉಂಟಾಗಬಹುದಾದ ಸಂವೇದನಾನುಭವವೂ ಮೇಲ್ಕಂಡ ವ್ಯತ್ಯಾಸಗಳಿಗೆ ಕಾರಣವಾಗುತ್ತದೆ.
	ಒಂದೇ ಇಂದ್ರಿಯ ಕ್ಷೇತ್ರಕ್ಕೆ ಸೇರಿದ ಉದ್ದೀಪಕಗಳ ವಿವಿಧ ಲಕ್ಷಣಗಳಿಗೆ ಅನುಗುಣವಾಗಿ ಪ್ರತಿಕ್ರಿಯೆ ಕಾಲ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ, ಉದ್ದೀಪಕದ ತೀವ್ರತೆಯಿಂದ ಪ್ರತಿಕ್ರಿಯೆಯ ವೇಗ ಗಣನೀಯವಾಗಿ ಹೆಚ್ಚುವುದು ಸಾಮಾನ್ಯ ಹೀಗಿದ್ದರೂ ಉದ್ದೀಪಕಗಳ ತೀವ್ರತೆ ಮತ್ತು ಪ್ರತಿಕ್ರಿಯೆ ಕಾಲಗಳ ನಡುವೆ ಇರುವ ಸಂಬಂಧ ರೇಖಾತ್ಮಕವಾಗಿರುವುದಿಲ್ಲವೆಂಬುದು ಗಮನಾರ್ಹ ಅಂಶ. ಮಧ್ಯಂತರದ ತೀವ್ರತೆ ಪ್ರತಿಕ್ರಿಯೆಯ ವೇಗವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಉದ್ದೀಪಕದ ತೀವ್ರತೆ ಮಾತ್ರವಲ್ಲದೆ ಅದರ ಅವಧಿ ಹಾಗೂ ನೆಲೆಗಳೂ ಪ್ರತಿಕ್ರಿಯೆ ಕಾಲದ ಮೇಲೆ ಪ್ರಭಾವ ಬೀರುತ್ತವೆ. ಒಟ್ಟಿನಲ್ಲಿ ಇಂದ್ರಿಯೋದ್ದೀಪಕದ ಪ್ರಭಾವವನ್ನು ತೀವ್ರಗೊಳಿಸುವ ಅಥವಾ ಅನುಕೂಲ ಪಡಿಸುವ ಯಾವುದೇ ಸ್ಥಿತಿಗತಿ ಪ್ರತಿಕ್ರಿಯೆ ಕಾಲವನ್ನು ಮೊಟಕುಗೊಳಿಸುತ್ತದೆ ಎಂಬುದನ್ನು ಮರೆಯಲಾಗದು.
	ಚಿತ್ರವಿನ್ಯಾಸ ಮತ್ತು ಮನೋವೃತ್ತಿ : ಗೊತ್ತಾದ ಉದ್ದೀಪಕವೊಂದಕ್ಕೆ ಜೀವಿ ತೋರಿಸುವ ಪ್ರತಿಕ್ರಿಯೆ ಅದರ ಸಿದ್ಧತಾಸ್ಥಿತಿಯ ಸೂಚಕವೂ ಆಗುತ್ತದೆ. ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ನಮಗೆ ಸಿದ್ಧಸ್ಥಿತಿಯುಂಟಾಗುತ್ತದಾಗಿ ಪ್ರತ್ಯಾವರಣದೊಂದಿಗೆ ಹೆಚ್ಚು ವಿಲಂಭವಿಲ್ಲದೆ ಹೊಂದಾಣಿಕೆ ಸಾಧಿಸುತ್ತೇವೆ. ಉದಾಹರಣೆಗೆ, ಮೋಟಾರು ಚಾಲಕನೊಬ್ಬ, ತನ್ನ ಮಾನಸಿಕ ಸಜ್ಜಿನಿಂದಾಗಿ, ತನ್ನ ದೈನಂದಿನ ಚಾಲನಕಾರ್ಯವನ್ನು ವೇಗವಾಗಿ ನಿರ್ವಹಿಸಬಲ್ಲ. ಆದರೆ ಜೀವಿಯ ಚಿತ್ತವಿನ್ಯಾಸದಲ್ಲಿ ಅಸ್ತವ್ಯಸ್ತತೆಯಿದ್ದರೆ, ಪ್ರತಿಕ್ರಿಯೆ ಕಾಲ ಗಣನೀಯವಾಗಿ ಹೆಚ್ಚಾಗುತ್ತದೆ. ಉದಾಹರಣೆಗೆ, ಪ್ರಾಯೋಗಿಕವಾಗಿ ಮುನ್ನಾವಧಿಯನ್ನು (ಉದ್ದೀಪಕಕ್ಕೆ ಮೊದಲು ಜೀವಿಗೆ ಕೊಡುವ ಸಿದ್ಧತಾವಧಿ) ಪರಿಶೀಲಿಸೋಣ. ವಿವಿಧ ಅಂತರದ ಮುನ್ನಾವಧಿಗಳನ್ನು ಅಡ್ಡಾದಿಡ್ಡಿಯಾಗಿ ಕೊಟ್ಟಾಗ, ಪ್ರತಿಕ್ರಿಯೆ ಕಾಲದ ಮೇಲೆ ಅಷ್ಟಾಗಿ ಪರಿಣಾಮವಾಗದು. ಆದರೆ ವಿವಿಧ ಅಂತರಗಳುಳ್ಳ ಮುನ್ನಾವಧಿಗಳನ್ನು ಕ್ರಮಬದ್ಧವಾಗಿ ಕೊಟ್ಟಾಗ, ಪರೀಕ್ಷಾರ್ಥಿಯಲ್ಲಿ ಒಂದು ನಿರೀಕ್ಷಣಾಲಯ ರೂಪಗೊಂಡು ಪ್ರತಿಕ್ರಿಯಾ ವೇಗದ ಮೇಲೆ ಪ್ರಭಾವ ಬೀರುತ್ತದೆ. ಪರೀಕ್ಷಾರ್ಥಿಯ ನಿರೀಕ್ಷಣಾಲಯ ಪ್ರತಿಕ್ರಿಯೆ ಕಾಲದ ಮೇಲೆ ಬೀರುವ ಪ್ರಭಾವವನ್ನು ಚಿತ್ರ(2)ರಲ್ಲಿ ಕಾಣಬಹುದು.
	ಓ.ಎಚ್. ಮೌರರ್ ನಡೆಸಿದ ಈ ಪ್ರಯೋಗದಲ್ಲಿ 12 ಸೆಕೆಂಡುಗಳ ಅಂತರಗಳಲ್ಲಿ, ಉದ್ದೀಪಕದ ಬರುವಿಕೆಯನ್ನು ನಿರೀಕ್ಷಿಸಲು ಪ್ರಯೋಗಾರ್ಥಿಗಳಿಗೆ ತರಬೇತಿ ಕೊಡಲಾಯಿತು. ಆದರೆ 12 ಸೆಕೆಂಡುಗಳ ಅಂತರಗಳನ್ನು ಬಿಟ್ಟು ಇತರ ಅಂತರಗಳಲ್ಲಿ ನಡುನಡುವೆ ಉದ್ದೀಪಕಗಳನ್ನು ಕೊಟ್ಟಾಗ, ಮೇಲ್ಕಂಡ ಚಿತ್ರದಲ್ಲಿ ತೋರಿಸಿರುವಂತೆ, ಪ್ರತಿಕ್ರಿಯೆ ಕಾಲದಲ್ಲಿ ಹೆಚ್ಚಳ ಕಂಡುಬಂದಿತು. ಒಟ್ಟಿನಲ್ಲಿ ನಿರೀಕ್ಷಣಾಲಯ ಅಥವಾ ಸಿದ್ಧತಾವಿನ್ಯಾಸ ಪ್ರತಿಕ್ರಿಯೆ ಕಾಲದ ಮೇಲೆ ಪ್ರಭಾವ ಬೀರುವುದು ಇದರಿಂದ ಸ್ಪಷ್ಟವಾಗುತ್ತದೆ.

ಚಿತ್ರ-2

	ಇಂದ್ರಿಯ ಮತ್ತು ಗತಿ ಅಭಿವೃತ್ತಿಗಳು : ಚಿತ್ರವಿನ್ಯಾಸದಂತೆಯೆ ಪ್ರಯೋಗಾರ್ಥಿಯ ಅಭಿವೃತ್ತಿಯೂ ಪ್ರತಿಕ್ರಿಯೆ ಕಾಲದ ಮೇಲೆ ಪ್ರಭಾವ ಬೀರುತ್ತದೆ. ಪ್ರಾಯೋಗಿಕವಾಗಿ ಇಂದ್ರಿಯ ಮತ್ತು ಗತಿ ಅಭಿವೃತ್ತಿಗಳ ನಡುವಣ ಭೇದವನ್ನು ಗುರುತಿಸಲಾಗಿದೆ. ದೊರೆತ ಸತ್ಯಾಂಶಗಳ ಪ್ರಕಾರ ಗತಿ ಅಭಿವೃತ್ತಿ ಪ್ರತಿಕ್ರಿಯೆ ಕಾಲವನ್ನು ಮೊಟಕುಗೊಳಿಸುತ್ತದೆ. ಆದರೆ ಸಿದ್ಧತಾಸ್ಥಿತಿಯ ಅವಧಿ ಹೆಚ್ಚಿದಂತೆ, ಯಾವುದೇ ರೀತಿಯ ಅಭಿವೃತ್ತಿಯಿದ್ದಾಗಲೂ ಸಾಪೇಕ್ಷವಾಗಿ ಪ್ರತಿಕ್ರಿಯೆ ಕಾಲ ಹೆಚ್ಚಾಗುತ್ತದೆ.
	ವೈಯುಕ್ತಿಕ ವ್ಯತ್ಯಾಸಗಳು : ಮಾನಸಿಕ ಪರೀಕ್ಷಣ ಸಂಪ್ರದಾಯದ ಒಂದು ಅವಿಭಾಜ್ಯ ಅಂಗವೆಂಬುದಾಗಿ ಪರಿಗಣಿತವಾಗಿರುವ ಪ್ರತಿಕ್ರಿಯೆ ಕಾಲ ಮಾಪನ ಗಣನೀಯ ವೈಯುಕ್ತಿಕ ವ್ಯತ್ಯಾಸಗಳನ್ನು ಬೆಳಕಿಗೆ ತಂದಿದೆ. ಉದ್ದೀಪಕಗಳ ಸಾಮ್ಯವಾಗಲೀ ಪರೀಕ್ಷಾರ್ಥಿಗೆ ಕೊಡುವ ತರಬೇತಿಯಾಗಲೀ ಪ್ರತಿಕ್ರಿಯೆಕಾಲದಲ್ಲಿ ವೈಯುಕ್ತಿಕ ವ್ಯತ್ಯಾಸಗಳಿಲ್ಲದಂಥೆ ಮಾಡಲಾರವು. ಆದ್ದರಿಂದ ಪ್ರತಿಕ್ರಿಯೆಯ ವೇಗ ವ್ಯಕ್ತಿಸಾಮಥ್ರ್ಯಗಳಲ್ಲೊಂದೆಯ ಭಾವಿಸಲಾಗಿದೆ. ಒಬ್ಬ ವ್ಯಕ್ತಿ ತನ್ನ ಪ್ರತಿಕ್ರಿಯೆ ವೇಗದಲ್ಲಿ ಇತರ ವ್ಯಕ್ತಿಗಳಿಗಿಂತ ಹೆಚ್ಚು ಕಡಿಮೆ ಭಿನ್ನವಾಗಿರುವುದು ಮಾತ್ರವಲ್ಲದೆ, ವಿವಿಧ ಸನ್ನಿವೇಶಗಳು ಮತ್ತು ವಿವಿಧ ಸಮಯಗಳಲ್ಲಿ, ತನ್ನ ಪ್ರತಿಕ್ರಿಯೆ ವೇಗದಲ್ಲಿಯೇ ಭಿನ್ನತೆ ತೋರಿಸುತ್ತಾನೆ. ಇದಕ್ಕೆ ಬಾಹ್ಯಪ್ರತ್ಯಾವರಣ ಸ್ಥಿತಿಗತಿಗಳಿಗಿಂತ ಹೆಚ್ಚಾಗಿ ಆಂತರಿಕ ಸ್ಥಿತಿಗತಿಗಳು ಕಾರಣವಾಗುತ್ತವೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಹಸಿದಾಗ ಮತ್ತು ಹೊಟ್ಟಿ ತುಂಬಿದಾಗ ಒಂದೇ ರೀತಿಯ ಉದ್ದೀಪಕಗಳಿಗೆ ತೋರಿಸುವ ಪ್ರತಿಕ್ರಿಯೆ ವೇಗಗಳಲ್ಲಿ ಗಣನೀಯ ವ್ಯತ್ಯಾಸ ಕಂಡುಬರಬಹುದು. ಇದರಂತೆಯೆ ಸಾಮಾನ್ಯಚಿತ್ತಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಗೊತ್ತಾದ ಉದ್ದೀಪಕಕ್ಕೆ ತೋರಿಸುವ ಪ್ರತಿಕ್ರಿಯೆ ವೇಗಕ್ಕೂ ಮದ್ಯದ ಅಮಲಿನಲ್ಲಿದ್ದಾಗ ತೋರಿಸುವ ಪ್ರತಿಕ್ರಿಯೆ ವೇಗಕ್ಕೂ ಗಣನೀಯ ವ್ಯತ್ಯಾಸ ಕಾಣಬಹುದು.
	ಅನ್ಯಯ : ಅನ್ವಯಾತ್ಮಕವಾಗಿ ನೋಡಿದಾಗ, ಪ್ರತಿಕ್ರಿಯೆ ಕಾಲ ಪ್ರಯೋಗಗಳಿಂದ ದೊರೆತ ತಥ್ಯಾಂಶಗಳು ವ್ಯಾವಹಾರಿಕವಾಗಿ ತುಂಬ ಪ್ರಯೋಜನಕಾರಿಯಾಗಿವೆ. ಇಂದು ನಾವು ವಾಸಿಸುತ್ತಿರುವ ವೈಜ್ಞಾನಿಕ ಸಮಾಜದ ಆಗುಹೋಗುಗಳಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ವೇಗದ ಪ್ರತಿಕ್ರಿಯೆ ವಿನ್ಯಾಸವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಅಲ್ಲದೆ, ವಿವಿಧ ಕಾರ್ಯಗಳನ್ನು ಪರಿಣಾಮ ಕೆಡದಂತೆ ಶೀಘ್ರಗತಿಯಲ್ಲಿ ನಿರ್ವಹಿಸುವಂಥ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ಪ್ರತಿಕ್ರಿಯೆ ಕಾಲ ನೆರವಾಗಬಲ್ಲದು. ಮೋಟಾರು ಚಾಲಕರು, ವಿಮಾನವಾಹಕರು, ವೇಗವಾಗಿ ಚಲಿಸುತ್ತಿರುವ ಯಂತ್ರೋಪಕರಣಗಳನ್ನು ನಿಯಂತ್ರಿಸುವವರು ಇತ್ಯಾದಿ ಹಲವು ರೀತಿಯ ತಂತ್ರಜ್ಞರ ಹಾಗೂ ಪರಿಣತರನ್ನು ಆಯ್ಕೆ ಮಾಡುವಲ್ಲಿ ಪ್ರತಿಕ್ರಿಯೆ ಕಾಲದ ನೆರವು ಬೇಕಾಗುತ್ತದೆ. ಉದಾಹರಣೆಗೆ ಚಾಲಕ ಪರೀಕ್ಷಣ ಸಾಧನದಲ್ಲಿ ಪ್ರತಿಕ್ರಿಯೆಕಾಲವನ್ನು ಅಳೆಯುವ ವ್ಯವಸ್ಥೆ ಒಂದು ಅವಿಭಾಜ್ಯ ಅಂಗವೆನಿಸಿದೆ. ಇಷ್ಟಲ್ಲದೆ, ಇತರ ಕೆಲವು ಮಾನಸಿಕ ಶಕ್ತಿಸಾಮಥ್ರ್ಯಗಳನ್ನು ಅಳೆಯುವುದರಲ್ಲೂ ಪ್ರತಿಕ್ರಿಯೆ ಕಾಲವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಯುಕ್ತ ಉದಾಹರಣೆಗಳೆಂದರೆ ವೇಗವನ್ನು ಪರಿಗಣಿಸುವ ಬುದ್ಧಿಶಕ್ತಿ ಮತ್ತು ಅಭಿಕ್ಷಮತೆಪರೀಕ್ಷೆಗಳು.
(ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ